ನಿಂಬೆ
	ರೂಟೇಸೀ ಕುಟುಂಬಕ್ಕೆ ಸೇರಿದ ಜನಪ್ರಿಯ ಫಲವೃಕ್ಷ (ಲೈಮ್). ಸಿಟ್ರಸ್ ಆರಂಟಿಫೋಲಿಯ ಇದರ ಶಾಸ್ತ್ರೀಯ ಹೆಸರು. ಉಷ್ಣವಲಯದ ದೇಶಗಳಲ್ಲೆಲ್ಲ ಕಾಣದೊರೆಯುತ್ತದೆ. ಇದು ಪೂರ್ವ ಏಷ್ಯದ ದ್ವೀಪಸಮೂಹಗಳ ಮೂಲ ನಿವಾಸಿಯೆಂದೂ ಅಲ್ಲಿಂದ ಇದನ್ನು ಏಷ್ಯದ ಮುಖ್ಯ ಭೂಭಾಗಕ್ಕೆ ಕೊಂಡೊಯ್ಯಲಾಯಿತೆಂದೂ ಸ್ವಿಂಗಲ್ ಎಂಬಾತ ಹೇಳಿದರೆ ಉತ್ತರ ಭಾರತದಲ್ಲಿ ಕಾಡುಗಿಡವಾಗಿ ಬೆಳೆಯುತ್ತಿರುವುದಾಗಿ ಇದರ ತವರು ಭಾರತವೇ ಇರಬೇಕೆಂದು ಇನ್ನು ಕೆಲವರು ಅಭಿಪ್ರಾಯಪಡುತ್ತಾರೆ. ಇದನ್ನು 13ನೆಯ ಶತಮಾನದಲ್ಲಿ ಯೂರೋಪಿಗೆ ತೆಗೆದುಕೊಂಡು ಹೋಗಿ ಬೆಳೆಸಲಾಯಿತೆನ್ನಲಾಗಿದೆ. ಸ್ಪ್ಯಾನಿಷರ ಮೂಲಕ ಇದು ಅಮೆರಿಕವನ್ನು ಸೇರಿತು. ಇಂದು ಮೆಕ್ಸಿಕೊ, ಈಜಿಪ್ಟ್, ವೆಸ್ಟ್ ಇಂಡೀಸುಗಳು ಇದರ ಕೃಷಿಗೆ ಹೆಸರಾಗಿವೆ.

	ಇದು ಸುಮಾರು 5 ಮೀ. ಎತ್ತರಕ್ಕೆ ತುಂಬ ಕವಲೊಡೆದು ಬೆಳೆಯುವ ಸಣ್ಣ ಗಾತ್ರದ ಮರ. ಕಾಂಡದುದ್ದಕ್ಕೂ ಚಿಕ್ಕ ಚಿಕ್ಕ ಮುಳ್ಳುಗಳುಂಟು. ಸರಳ, ಪರ್ಯಾಯ ಮಾದರಿಯಲ್ಲಿ ಜೋಡಣೆಗೊಂಡಿದೆ. ಎಲೆತೊಟ್ಟಿನ ಆಚೀಚೆ ಸಣ್ಣರೆಕ್ಕೆಯಂಥ ರಚನೆಗಳುಂಟು. ಎಲೆಗಳಲ್ಲಿ ತೈಲಗ್ರಂಥಿಗಳಿವೆ. ಇವುಗಳಲ್ಲಿ ಉತ್ಪತ್ತಿಯಾಗುವ ತೈಲದಿಂದಾಗಿ ಎಲೆಗಳಿಗೆ ವಾಸನೆಯಿದೆ. ಹೂಗೊಂಚಲುಗಳು ಎಲೆಗಳ ಕಂಕುಳಲ್ಲಿ ಸ್ಥಿತವಾಗಿವೆ. ಒಂದೊಂದರಲ್ಲೂ 1-7 ಹೂಗಳುಂಟು. ಹೂಗಳ ಬಣ್ಣ ಬಿಳಿ. ಪ್ರತಿ ಹೂವಿನಲ್ಲಿ 5 ದಳಗಳು, 20-25 ಕೇಸರಗಳು, 9-11 ಕೋಣೆಗಳಿಂದ ಕೂಡಿದ ಅಂಡಾಶಯ ಉಂಟು. ಫಲ ಹೆಸ್ಪರಿಡಿಯಮ್ ಎಂಬ ಬಗೆಯದು. ಗುಂಡಗೆ ಇಲ್ಲವೆ ಅಂಡಾಕಾರವಾಗಿದೆ. ಹಣ್ಣಿನ ಬಣ್ಣ ಹಳದಿ. ಸಿಪ್ಪೆ ತೆಳು; ತಿರುಳಿಗೆ ಬಲವಾಗಿ ಅಂಟಿಕೊಂಡಿದೆ. ಒಳಗೆ ಅನೇಕ ತೊಳೆಗಳನ್ನು ಬಿಡಿಸಲು ಬಾರದು. ಫಲ ತುಂಬ ಹುಳಿ. ಹಣ್ಣಿನ ರಸದಲ್ಲಿ ಇತರ ಜಂಬೀರ ಫಲಗಳ ರಸದಲ್ಲಿರುವಂತೆಯೇ ಅಧಿಕ ಮೊತ್ತದ ಸಿಟ್ರಿಕ್ ಆಮ್ಲ ಹಾಗೂ ಸಿ. ವೈಟಮಿನ್ನುಗಳಿವೆ.

	ನಿಂಬೆಯನ್ನು ಬೀಜಗಳಿಂದಾಗಲೀ ಕಣ್ಣು ಕಸಿ ಇಲ್ಲವೆ ಗೂಟ ವಿಧಾನದಿಂದಾಗಲೀ ವೃದ್ಧಿಸಬಹುದು. ಬೀಜಗಳಿಂದ ಬೆಳೆಸಿದ ಗಿಡಗಳು ಹೆಚ್ಚು ಫಲ ಕೊಡುವುದಿಲ್ಲ. ನಿಂಬೆಗಿಡಗಳನ್ನು ಗಿಡದಿಂದ ಗಿಡಕ್ಕೆ 3-4 ಮೀ ಅಂತರವಿರುವಂತೆ ಬೆಳೆಸಲಾಗುತ್ತದೆ. 3ಮೀ ಅಂತರ ಬಿಟ್ಟರೆ ಎಕರೆಗೆ 300 ಸಸಿಗಳೂ 4 ಮೀ ಅಂತರ ಬಿಟ್ಟರೆ 190 ಸಸಿಗಳೂ ಇದ್ದಂತಾಗುವುವು. ನಿಂಬೆ ಬೆಳೆಸುವ ನೆಲದಲ್ಲಿ ಎಲೆಗೊಬ್ಬರವೂ, ಕಬ್ಬಿಣ, ತಾಮ್ರ ಮ್ಯಾಂಗನೀಸ್, ಜಿಂಕ್ ಹಾಗೂ ಮೆಗ್ನೀಷಿಯಮ್ ಖನಿಜಗಳೂ ಯಥೇಚ್ಛವಾಗಿರಬೇಕು.

	ನಿಂಬೆಯಲ್ಲಿ ಮೆಕ್ಸಿಕನ್ (ವೆಸ್ಟ್ ಇಂಡಿಯನ್) ಹಾಗೂ ತಾಹಿತಿ (ಪರ್ಶಿಯನ್) ಎಂಬ ಮುಖ್ಯ ತಳಿಗಳುಂಟು. ತಾಹಿತಿ ತಳಿಯ ಹಣ್ಣು ಬೀಜರಹಿತ. ಭಾರತದಲ್ಲಿ ಪ್ರಸಿದ್ಧ ತಳಿಗಳಾವುವೂ ಇಲ್ಲ. ಅಸ್ಸಾಮಿನಲ್ಲಿ ಬೆಳೆಯುವ ಅಭ್ಯಾಪುರಿ ಎಂಬುದು ಉತ್ತಮ ಬಗೆಯದೆನಿಸಿದೆ.

	ನಿಂಬೆಯನ್ನು ಅದರ ತಾಜಾ ಹಣ್ಣಿಗಾಗಿ ಬೆಳೆಸುವುದೇ ವಾಡಿಕೆ. ಇದರ ರಸದಿಂದ ಷರಬತ್ತು ತಯಾರಿಸುವುದಲ್ಲದೆ ಮಾರ್ಮಲೆಂಡ್, ಕಾರ್ಡಿಯಲ್ ಮುಂತಾದವನ್ನೂ ತಯಾರಿಸುವರು. ನಿಂಬೆಯರಸವನ್ನು ಬಟ್ಟಿಯಿಳಿಸಿ ತೈಲವನ್ನು ತೆಗೆವುದಿದೆ. ಸಿಪ್ಪೆಯಿಂದಲೂ ಎಣ್ಣೆಯನ್ನು ಪಡೆಯಬಹುದು. ಈ ಎಣ್ಣೆಯನ್ನು ಪಾನೀಯಗಳಿಗೆ ವಾಸನೆ ಕಟ್ಟಲೂ ಸಿಹಿತಿಂಡಿಗಳ ತಯಾರಿಕೆಯಲ್ಲೂ ಬಳಸುವುದಿದೆ.
(ಎಂ.ಎಚ್.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ